ನರಸಿಂಹ ಗುಪ್ತ (ಬಾಲಾದಿತ್ಯ) -
	ಭಾರತದಲ್ಲಾಳಿದ ಗುಪ್ತ ವಂಶದ ಒಬ್ಬ ದೊರೆ. ಪುರುಗುಪ್ತನ ಮಗ. ಈತ ಸುಮಾರು 467 ರಿಂದ 473ರ ವರೆಗೆ ಆಳ್ವಿಕೆ ನಡೆಸಿದ. ಆ ವೇಳೆಗೆ ಗುಪ್ತ ಸಾಮ್ರಾಜ್ಯ ಕ್ಷೀಣದಶೆಯಲ್ಲಿತ್ತು. ಇವನು ತನ್ನ ಸೋದರ ಬುಧ ಗುಪ್ತನ ಅನಂತರ ಪಟ್ಟಕ್ಕೆ ಬಂದನೇ ಎಂಬುದು ಖಚಿತವಾಗಿ ತಿಳಿದುಬಂದಿಲ್ಲ. ಸಿಂಹಾಸನಕ್ಕಾಗಿ ಇಬ್ಬರ ಅಥವಾ ಮೂವರು ಉತ್ತರಾಧಿಕಾರಿಗಳಲ್ಲಿ ಕಾದಾಟವಾಗಿ ಗುಪ್ತ ಸಾಮ್ರಾಜ್ಯವನ್ನು ಮೂರು ಭಾಗಗಳಾಗಿ ವಿಂಗಡಿಸಿರಬಹುದೆಂದು, ವೈನ್ಯಗುಪ್ತ ಬಂಗಾಳದಲ್ಲೂ, ಭಾನು ಗುಪ್ತ ಮಾಳವದಲ್ಲೂ ನರಸಿಂಹ ಗುಪ್ತ ಮಗಧದಲ್ಲೂ ಆಳ್ವಿಕೆ ನಡೆಸಿದ್ದಿರಬಹುದೆಂದು, ಇಲ್ಲವೇ ನರಸಿಂಹ ಗುಪ್ತ ಭಾನು ಗುಪ್ತನ ಅನಂತರ ಸಿಂಹಾಸನವನ್ನು ಏರಿರಬಹುದೆಂದು ಹೇಳಲಾಗಿದೆ. ಶಾಸನಗಳಲ್ಲಿ 1ನೇಯ ಕುಮಾರಗುಪ್ತನ ಮಗ ಪುರುಗುಪ್ತ, ಪುರು ಗುಪ್ತನ ಮಗ ನರಸಿಂಹ ಗುಪ್ತ (ಬಾಲಾದಿತ್ಯ). ನರಸಿಂಹನ ಮಗ ಕುಮಾರ ಗುಪ್ತ, ಕುಮಾರ ಗುಪ್ತನ ಮಗ ವಿಷ್ಣುಗುಪ್ತ- ಇವರ ಹೆಸರುಗಳಿವೆ. 473-74ರಲ್ಲಿ ಆಳ್ವಿಕೆ ನಡೆಸಿದ ಕುಮಾರಗುಪ್ತ ನರಸಿಂಹ ಗುಪ್ತನ ಮಗನೆಂದು ಊಹಿಸಲಾಗಿದೆ. ನರಸಿಂಹ ಗುಪ್ತ ಪಟ್ಟಕ್ಕೆ ಬಂದ ವಿಚಾರವಾಗಿ ಖಚಿತವಾದ ವಿವರಗಳು ಸಿಕ್ಕಿಲ್ಲವಾದರೂ ಇವನು ಆಂತರಿಕ ಗಲಭೆ ಮತ್ತು ಪರಕೀಯ ದಾಳಿಗಳು ಪ್ರಬಲವಾಗಿದ್ದ ಕಾಲದಲ್ಲಿ ಗುಪ್ತ ಸಿಂಹಾಸನವನ್ನೇರಿದನೆಂಬುದು ಖಚಿತವಾಗಿ ತಿಳಿದುಬಂದಿದೆ. ಪ್ರಾಂತೀಯ ಸತ್ರಪರು ಹಾಗೂ ಸಾಮಂತ ದೊರೆಗಳು ಕೇವಲ ತೋರಿಕೆಗೆ ಗುಪ್ತ ಸಾಮ್ರಾಟನ ಅಧಿಕಾರಕ್ಕೆ ಗೌರವ ತೋರಿಸುತ್ತಿದ್ದರು. ವಾಸ್ತವವಾಗಿ ಅವರು ಸ್ವತಂತ್ರ ಪ್ರಭುಗಳಂತೆ ವರ್ತಿಸುತ್ತಿದ್ದರು. ರಾಜಕೀಯ ದಿಗಂತದಲ್ಲಿ ಉಲ್ಕೆಯಂತೆ ತೋರಿಬಂದ ಯಶೋವರ್ಮನೆಂಬ ಸಾಹಸಿ ಮಾಳವ ರಾಜ್ಯದಲ್ಲಿ ತನ್ನ ಸ್ವತಂತ್ರ ಅಧಿಕಾರವನ್ನು ಸ್ಥಾಪಿಸಿ, ಮಿಹಿರಗುಲನ ನೇತೃತ್ವದಲ್ಲಿ ಬಂದ ಹೂಣರನ್ನು ಸೋಲಿಸಿದನಲ್ಲದೇ, ಪೂರ್ವ ಹಾಗೂ ಪಶ್ಚಿಮ ಪ್ರದೇಶಗಳ ಮೇಲೆ ಆಕ್ರಮಣ ಮಾಡಿ ವಿಜಯಿಯಾದ. ಅಲ್ಲದೆ, ಅವನು ನರಸಿಂಹ ಗುಪ್ತನನ್ನು ಎದುರಿಸಿದ.

	ಯಶೋವರ್ಮನ ದಾಳಿಗೆ ನರಸಿಂಹ ಗುಪ್ತ ತುತ್ತಾಗದೆ ಪ್ರಭುವಾಗಿಯೇ ಉಳಿದರೂ ಗುಪ್ತ ಸಂತತಿಯ ಖ್ಯಾತಿ, ಗೌರವ, ಪ್ರತಿಷ್ಠೆಗಳಿಗೆ ಇದರಿಂದ ಬಲವಾದ ಪೆಟ್ಟು ಬಿತ್ತು. ಯಶೋವರ್ಮನಿಂದ ಪೆಟ್ಟು ತಿಂದರೂ ಪ್ರಬಲನಾಗಿಯೇ ಇದ್ದ ಹೂಣರ ನಾಯಕ ಮಿಹಿರಗುಲ ಗುಪ್ತರಾಜ್ಯದಲ್ಲಿದ್ದ ಗೊಂದಲಮಯ ಪರಿಸ್ಥಿತಿಯ ದುರುಪಯೋಗ ಪಡೆದುಕೊಂಡು ಅದರ ಮೇಲೆ ಆಕ್ರಮಣ ಮಾಡಿದ. ಈ ಸಂಗತಿಗೆ ಇರುವ ಒಂದೇ ಆಧಾರವೆಂದರೆ, ಹ್ಯೂಯೆನ್ ತ್ಸಾಂಗನ ಬರೆಹ. ಅದರ ಪ್ರಕಾರ, ಮೊದಲು ಮಿಹಿರಗುಲನ ಕೈ ಮೇಲಾಗಿದ್ದು, ನರಸಿಂಹ ಗುಪ್ತ ಅವನಿಗೆ ಕಪ್ಪ ಕಾಣಿಕೆಗಳನ್ನು ಕೊಡಬೇಕಾಯಿತು. ತನ್ನ ಪೂರ್ವಿಕರಂತೆ ಹೂಣರ ಆಕ್ರಮಣವನ್ನು ತಡೆಗಟ್ಟುವ ರಕ್ಷಕ ದೊರೆಯ ಪಾತ್ರವನ್ನು ನಿರ್ವಹಿಸಲು ಅಶಕ್ತನಾಗಿ ನರಸಿಂಹ ಬಹು ಅಪಮಾನವನ್ನು ಅನುಭವಿಸಬೇಕಾಯಿತು. ಆದರೆ ಮಿಹಿರಗುಲನ ಅಮಾನುಷಕೃತ್ಯಗಳು ಅತಿಯಾದಾಗ ನರಸಿಂಹ ಗುಪ್ತ ಕಪ್ಪಕಾಣಿಕೆಗಳನ್ನು ಕೊಡದೇ ಅವನನ್ನು ವಿರೋಧಿಸಿದ. ಮಿಹಿರಗುಲ ಅವನ ರಾಜ್ಯದ ಮೇಲೆ ದಂಡೆತ್ತಿ ಬಂದಾಗ ಅವನು ತನ್ನ ಸೈನ್ಯದೊಡನೆ ಒಂದು ದ್ವೀಪದಲ್ಲಿ ಆಶ್ರಯ ಪಡೆದ. ಅಲ್ಲಿಗೂ ಬೆನ್ನಟ್ಟಿ ಬಂದ ಮಿಹಿರಗುಲ ಕೊನೆಗೆ ಸೋತು ಕೈದಿಯಾದ. ಅವನನ್ನು ಕೊಲ್ಲಲು ಉದ್ದೇಶಿಸಿದ ನರಸಿಂಹ, ತನ್ನ ತಾಯಿಯ ಕೋರಿಕೆಯ ಮೇರೆಗೆ ಜೀವ ಸಹಿತ ಬಿಟ್ಟುಬಿಟ್ಟ. ನರಸಿಂಹ ಗುಪ್ತ ಟಂಕಿಸಿದ ಒಂದೇ ತರನಾಗಿದ್ದ ಚಿನ್ನದ ನಾಣ್ಯಗಳು ಅವನು ಬಾಲಾದಿತ್ಯನೆಂಬ ಬಿರುದನ್ನು ಧರಿಸಿದ್ದನೆಂಬುದನ್ನು ತೋರಿಸುವುದರಿಂದ ಹ್ಯೂಯೆನ್ ತ್ಸಾಂಗ್ ಹೂಣರ ವಿಜಯಿ ಎಂದು ಹೊಗಳಿರುವ ನರಸಿಂಹ ಗುಪ್ತ ಬಾಲಾದಿತ್ಯನೂ ಇವನೂ ಒಬ್ಬನೇ ಎಂಬುದಾಗಿ ಊಹಿಸಲಾಗಿದೆ. ಆದರೆ, ಬಾಲಾದಿತ್ಯರು ಹಲವರು ಇರುವುದರಿಂದ ಸಂದೇಹಕ್ಕೆ ಕಾರಣವಾಗಿದೆ. ಹ್ಯೂಯೆನ್ ತ್ಸಾಂಗನ ಪ್ರಕಾರ ನರಸಿಂಹ ಗುಪ್ತ ಬೌದ್ಧ ಧರ್ಮಕ್ಕೆ ಆಶ್ರಯ ನೀಡಿದ್ದ. ಅವನು ನಾಲಂದದಲ್ಲಿ ಒಂದು ಬೃಹತ್ ಸಂಘಾರಾಮವನ್ನು ನಿರ್ಮಿಸಿದ.
(ಎಂ.ಬಿ.ಪಿ.; ಕೆ.ವಿ.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ